ಪ್ರವಾಹ -
	 ದಂಡೆಯ ನೈಸರ್ಗಿಕ ಮಿತಿಯನ್ನು ಅತಿಕ್ರಮಿಸಿ ಹರಿಯುವ ಹೊಳೆಯ ಹೊನಲು (ಫ್ಲಡ್). ಹೊಳೆಯಲ್ಲಿ ಪ್ರವಾಹ ಬಂದಾಗ ದಡದ ಪ್ರದೇಶಗಳಿಗೆ ಅಪಾಯವಾಗುವಷ್ಟು ಮಟ್ಟಿಗೆ ನೀರಿನ ಮಟ್ಟ ಏರುತ್ತದೆ. ಪ್ರವಾಹಗಳಿಗೆ ಮುಖ್ಯ ಕಾರಣಗಳಿವು: ಅತಿವೃಷ್ಟಿ, ಚಂಡಮಾರುತ, ಅಗ್ನಿಪರ್ವತದ ಚಟುವಟಿಕೆ ಮಂಜು ಅಥವಾ ಮಂಜುಗಡ್ಡೆ ಕರಗುವುದು, ಪಟ್ಟಣಗಳ ಬಳಿ ನದಿಗಳ ನಾಲೆಗಳನ್ನು ಆಕ್ರಮಿಸಿರುವುದು, ಭೂಕಂಪನ, ಸಮುದ್ರ ಒಳಗೆ ನುಗ್ಗುವುದು, ಮೇಲಿನವುಗಳಲ್ಲಿ ಎರಡು ಮೂರು ಕಾರಣಗಳು ಒಟ್ಟಿಗೆ ಸೇರಿರುವುದು.

	ಸುಮಾರು ನಲವತ್ತು ಶತಮಾನಗಳಿಂದಲೂ ಮಾನದ ತನ್ನ ಇತಿಹಸದಲ್ಲಿ ಪ್ರವಾಹಗಳಿಂದ ಆಗುವ ನಷ್ಟ ತಪ್ಪಿಸಿಕೊಳ್ಳಲು ಮಾಡಿರುವ ಪ್ರಯತ್ನಗಳು ನಿಷ್ಟಲವಾಗಿವೆ. ಚೀನಾದ ಯಾಂಗ್ಟ್ಸೀ ಮತ್ತು ಹುಯಾಂಗ್ ನದಿಗಳ ದಡಗಳಲ್ಲಿ ಪ್ರತಿಸಲವೂ ಆತ ವಿನಾಶಕಾರೀ ಪ್ರವಾಹಾನಂತರ ಬಯಲನ್ನು ಮತ್ತೆ ಆಕ್ರಮಿಸಿಕೊಂಡು ಸಂಕಟಪಟ್ಟಿದ್ದಾನೆ. ಆದರೆ ಈಜಿಪ್ಟಿನ ನೈಲ್ ನದಿಯ ಕಣಿವೆಯಲ್ಲಿ ಹೀಗಲ್ಲ. ನಿಯಂತ್ರಿತವಾಗಿ ಬರುವ ಪ್ರವಾಹವನ್ನು ಪ್ರತಿವರ್ಷವೂ ಬೇಸಾಯಕ್ಕಾಗಿ ಬಳಸಿಕೊಳ್ಳುತ್ತಲೇ ಬಂದಿದ್ದಾನೆ. ಈ ವಿಚಾರದಲ್ಲಿ ಒಂದು ನದಿಯ ಹಾಗೆ ಮತ್ತೊಂದು ಇರುವುದಿಲ್ಲ.

	ಕೆಲವು ಮಾರಕ ಪ್ರವಾಹಗಳು : 1555 ಸೆಪ್ಟೆಂಬರಿನಲ್ಲಿ ಗಾಳಿ ಪ್ರಬಲವಾಗಿ ಎದ್ದು ಮಳೆ ಸುರಿದಾಗ ವೆಸ್ಟ್‍ಮಿನಿಸ್ಟರಿನ ರಾಜನ ಅರಮನೆಯೂ ಸಭಾಂಗಣವೂ ನೀರಿನಲ್ಲಿ ಮುಳುಗಿದ್ದುವು. 1864 ಅಕ್ಟೋಬರಿನಲ್ಲಿ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಎದ್ದು ಸಮುದ್ರ ಸಾಮಾನ್ಯ ಮಟ್ಟಕ್ಕಿಂತ 300 ಸೆಂಮೀ ಮೇಲಕ್ಕೆ ಉಬ್ಬಿ ಗಂಗಾನದಿಯ ಮುಖದ ಹತ್ತಿರ ಚಪ್ಪಟೆಯಾದ ಭೂಮಿಯನ್ನು ಮುಚ್ಚಿ 45,000 ಜನರ ಪ್ರಾಣಗಳನ್ನು ಆಹುತಿಯಾಗಿ ತೆಗೆದುಕೊಂಡಿತು. 1922-23ರಲ್ಲಿ ಅಭೂತಪೂರ್ವವಾಗಿ ಬಂದ ಮಳೆಯಿಂದ ತುಂಗಾನದಿಯ ನೀರು ಎಡದಡದ ಮೇಲಿರುವ ಶಿವಮೊಗ್ಗ ಪಟ್ಟಣ ನುಗ್ಗಿ ಅಪಾರ ನಷ್ಟವನ್ನುಂಟುಮಾಡಿತು. 1927 ಫೆಬ್ರುವರಿ ತಿಂಗಳಿನಿಂದ ಜುಲೈ ತನಕ ಅಮೆರಿಕದ ಮಿಸಿಸಿಪಿ ನದಿಯಲ್ಲಿ ಬಂದ ಮಹಾಪೂರಗಳು ಈ ಶತಮಾನದ ಘೋರವಾದ ಆಪತ್ತುಗಳಲ್ಲಿ ಸೇರಿವೆ. ಆಗ ನೀರು ಹಳೆಯ ಮೈಸೂರು ದೇಶದ ವಿಸ್ತಾರದಷ್ಟು ನೆಲವನ್ನು ಆಕ್ರಮಿಸಿತ್ತು.

	ಪುರಾತನ ಕಾಲದಿಂದಲೂ ಶಾಂತವಾಗಿ ಹರಿಯುತ್ತಿದ್ದ ನದಿಗಳು ಆಗಾಗ ಮಾನವನಿಗೆ ವಿಪತ್ತನ್ನು ತಂದಿರುವ ನಿದರ್ಶನಗಳು ಅನೇಕ. ನದಿಗಳು ತಮ್ಮ ದಡಗಳ ಮೇಲೆ ಉರುಳಲು ಸಂತತವಾಗಿಯೂ ಧಾರಾಕಾರಾವಾಗಿಯೂ ಸುರಿಯುವ ಮಳೆ ಮತ್ತು ಕರಗುವ ಮಂಜು ಮುಖ್ಯ ಕಾರಣಗಳಾದರೂ ಇತರ ಕಾರಣಗಳಿಂದ ಈ ನಷ್ಟ ಹೆಚ್ಚಾಗಬಹುದು. ಎತ್ತರವಾದ ಅಲೆಗಳು ಎದ್ದು ನೀರು ಸಮುದ್ರಕ್ಕೆ ಹೋಗುವುದನ್ನು ತಡೆಯಬಹುದು. ಗಾಳಿ ಪ್ರಬಲವಾಗಿ ಒಳಗಡೆಗೆ ಬೀಸಿದಾಗ ಅಲೆಬಡಿತಕ್ಕೆ ಒಳಗಾಗುವ ಭಾಗದಲ್ಲಿ ಪ್ರವಾಹ ಮಟ್ಟ ಏರಬಹುದು. ನೆಲ ಮಳೆಯಿಂದ ಚೆನ್ನಾಗಿ ತೊಯ್ದಿದ್ದರೆ ಅಥವಾ ಗಡ್ಡೆ ಕಟ್ಟಿದ್ದರೆ ಅಲ್ಲಿ ನೀರು ಇಂಗದೆ ಅಷ್ಟು ದಂಡೆಗಳ ಮೇಲೆ ಉರುಳಬಹುದು. ಎರಡು ಮೂರು ಉಪನದಿಗಳಿಂದ ತಾಯಿನದಿಗೆ ಒಂದೇ ಸಾರಿ ವಿಶೇಷವಾಗಿ ನೀರು ನುಗ್ಗುಬಹುದು. ಇದು ಹೇಗೂ ಇರಲಿ. ನಾಗರಿಕತೆ ಬೆಳೆದ ಹಾಗೆ ಪ್ರವಾಹದಿಂದ ಆಗುವ ನಷ್ಟವೂ ಹೆಚ್ಚುತ್ತಿದೆ. ನದಿಗಳ ದಡಗಳಲ್ಲಿಯೇ ಅಲ್ಲದೆ ನದಿಯ ಕಣಿವೆಗಳಲ್ಲಿಯೂ ನಗರಗಳು, ಪಟ್ಟಣಗಳು ಮತ್ತು ಕಾರ್ಖಾನೆಗಳು ಬೆಳೆದಿವೆ. ಸೇತುವೆಗಳೂ ನದಿಯಲ್ಲಿ ಪ್ರವಾಹದ ನೀರು ಸರಾಗವಾಗಿ ಹರಿಯುವುದನ್ನು ತಡೆಯುತ್ತವೆ.

	ಈ ತನಕದ ದಾಖಲೆಗಳಲ್ಲಿ ಎದ್ದು ಕಾಣುವ ಮಹಾ ಪ್ರವಾಹಗಳು ಅಗ್ನಿ ಪರ್ವತಗಳ ಚಟುವಟಿಕೆಗಳಿಂದ ಉಂಟಾಗಿವೆ. 1883 ಅಗಸ್ಟಿನಲ್ಲಿ ಜಾವಾ ಮತ್ತು ಸುಮಾತ್ರ ದ್ವೀಪಗಳಲ್ಲಿ ಕ್ರಾಕಟೋವ ಅಗ್ನಿಪರ್ವತ ಮೇಲಕ್ಕೆ ಚಿಮ್ಮಿದಾಗ ಸಮುದ್ರದ ಅಲೆಗಳು 3600 ಪ್ರಾಣಗಳನ್ನು ಬಲಿ ತೆಗೆದುಕೊಂಡವು. ದೀಪಸ್ತಂಭಗಳು ಬೆಂಕಿಯ ಕಡ್ಡಿಗಳಂತೆ ಕೊಚ್ಚಿಹೋದುವು. ಸಮಾತ್ರದಲ್ಲಿ ನಿಂತಿದ್ದ ಯುದ್ಧ ಹಡಗು ಪ್ರವಾಹದಲ್ಲಿ ಪಕ್ಕಕ್ಕೆ ಸುಮಾರು 3.2 ಕಿಮೀ ದೂರ ಹೊಡದುಕೊಂಡು ಹೋಗಿ ಸಮುದ್ರ ಮಟ್ಟದ ಮೇಲೆ 9ಮೀ ಎತ್ತರದಲ್ಲಿ ನಿಂತಿತು. 1868ರಲ್ಲಿ ಪೆರುವಿನಲ್ಲಿ ಭೂಕಂಪನಗಳಿಂದ ಆದ ಪ್ರವಾಹದಲ್ಲಿ ಎರಡು ಪಟ್ಟಣಗಳು ಹೆಚ್ಚುಪಾಲು ನಾಶವಾದುವು. ಜಪಾನಿನ ಈಶಾನ್ಯ ತೀರದಲ್ಲಿ 1869 ಜೂನ್ ತಿಂಗಳಲ್ಲಿ ಬಂದ ಪ್ರವಾಹದಲ್ಲಿ ಸಮುದ್ರದ ಅಲೆಗಳು ಸುಮಾರು 18 ಮೀ ಎತ್ತರಕ್ಕೆ ಚಿಮ್ಮಿ 27,000 ಜನರನ್ನು ಅಹುತಿ ತೆಗೆದುಕೊಂಡುವು.

	ಪ್ರಾಚೀನ ಕಾಲಗಳಲ್ಲಿಯೂ ಮಹಾಪ್ರವಾಹದ ಭಯ ಇದ್ದೇ ಇತ್ತು. ಆದರೆ ಇಂದಿನ ಕೈಗಾರಿಕೆಯ ಯುಗದಲ್ಲಿ ನೀರಿನ ಅನುಕೂಲತೆಗಾಗಿ ಪ್ರಾಯಶಃ ಎಲ್ಲ ನದಿಗಳ ದಡಗಳಲ್ಲಿಯೂ ಕಚ್ಚಾ ಸಾಮಗ್ರಿಗಳನ್ನು ಸುಲಭವಾಗಿ ಪಡೆಯುವ ಸೌಕರ್ಯಕ್ಕಾಗಿ ಬಗೆಬಗೆಯ ವಿವಿಧ ಗಾತ್ರದ ಕೈಗಾರಿಕಾ ಕ್ಷೇತ್ರಗಳು ಬೆಳೆದು ಅಲ್ಲಿ ಜನಸಂಖ್ಯೆ ಏರುತ್ತದೆ. ಈ ಪ್ರವೃತ್ತಿ ಭಾರತದಲ್ಲಿ ಇನ್ನೂ ವಿಶೇಷವಾಗಿ ಬೆಳೆಯುತ್ತಿದೆ. ಏಕೆಂದರೆ ಇಂದಿನ ಜನಜೀವನಕ್ಕೆ ಅವಶ್ಯವಾದ ಅನುಕೂಲತೆಗಳನ್ನೆಲ್ಲ ನಮ್ಮ ಕೈಗಾರಿಕೆಗಳಿಂದಲೇ ತಯಾರಿಸಬೇಕಾಗಿದೆ. ಈ ಸಡಗರದಲ್ಲಿ ನೈಸರ್ಗಿಕವಾಗಿ ಆಗಾಗ ಬರಲೇ ಬೇಕಾದ ಮಹಾಪ್ರವಾಹಗಳನ್ನು ಅಲಕ್ಷ್ಯಮಾಡುವ ಸಂಭವ ಉಂಟು. ದೊಡ್ಡ ನದಿಗಳ ದಡಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವಾಗ ನದಿಯಲ್ಲಿ ಅನಿವಾರ್ಯವಾದ ಮಹಾಪ್ರವಾಹಗಳ ಕಡೆಗೆ ಗಮನವಿಡಬೇಕಾಗುತ್ತದೆ. ದಾಖಲೆ ಆಗಿರುವ ಅತ್ಯಂತ ವಿನಾಶಕರ ಪ್ರವಾಹವೆಂದರೆ ಆಗಸ್ಟ್ 1931ರಲ್ಲಿ ಚೀನಾದ ಹ್ವಾಂಗ್‍ಹೋ (ಹಳದಿ ನದಿ) ನದಿಯಲ್ಲಿ ಉಕ್ಕೇರಿದ್ದು, ಸುಮಾರು ಮೂವತ್ತೇಳು ಲಕ್ಷ ಮಂದಿ ಇದಕ್ಕೆ ಬಲಿ ಆದರು.

	ಪ್ರವಾಹದ ನಿಯಂತ್ರಣ : ಬಿಸಿಲು ಮತ್ತು ಬಿರುಗಾಳಿಯಂತೆ ಪ್ರವಾಹವೂ ನೈಸರ್ಗಿಕ ಘಟನೆ. ಎಲ್ಲ ದೇಶಗಳಲ್ಲಿಯೂ ಹೆಚ್ಚಾಗಿಯೋ ಕಡಿಮೆಯಾಗಿಯೋ ಪ್ರವಾಹಗಳು ಪ್ರತಿವರ್ಷವೂ ಬರುತ್ತಲೆ ಇವೆ. ಈಜಿಪ್ಟಿನಲ್ಲಿ ನೈಲ್ ಮಹಾನದಿಯ ಪ್ರವಾಹಗಳನ್ನು ವಿಶಾಲ ಬಯಲುಗಳ ನೀರಾವರಿಗಾಗಿ ಬಳಸಿಕೊಂಡಿದ್ದಾರೆ. ಆದರೆ ಭಾರತದಲ್ಲಿ ಕೋಸಿ, ಮಹಾನದಿ ಮೊದಲಾದ ನದಿಗಳಲ್ಲಿ ಮತ್ತು ಚೀನದ ಕೆಲವು ನದಿಗಳಲ್ಲಿ ಇವು ಪ್ರಕೃತಿಯ ಪ್ರಕೊಪದ ಚಿಹ್ನೆಗಳಾಗಿ ಹೊಲಗದ್ದೆಗಳಿಗೂ ದನಕರುಗಳಿಗೂ ಆಸ್ತಿಪಾಸ್ತಿಗಳಿಗೂ ಅಪಾರ ನಷ್ಟವನ್ನು ಕೆಲವು ವರ್ಷಗಳಲ್ಲಿ ಉಂಟುಮಾಡುತ್ತವೆ. ನಾಗರಿಕತೆ ಬೆಳೆದಷ್ಟೂ ಇದು ಹೆಚ್ಚಾಗುತ್ತಿದೆ. ಪ್ರವಾಹ ಹೆಚ್ಚಾಗಿ ಬಂದಾಗ ನದಿಯ ಕಣಿವೆಯ ಅಗಲವನ್ನೆಲ್ಲ ಆವರಿಸುತ್ತದೆ. ಇದಕ್ಕೆ ಪ್ರವಾಹದ ಬಯಲು ಅಥವಾ ಪ್ರವಾಹ ಮೈದಾನ ಎಂದು ಹೆಸರು. ಇಂಥ ಬಯಲುಗಳಲ್ಲಿ ನಗರಗಳೂ ಪಟ್ಟಣಗಳೂ ಕೈಗಾರಿಕಾ ಕ್ಷೇತ್ರಗಳೂ ಬೆಳೆಯುವುದು ವಾಡಿಕೆ. ಈಗ ಜಲಾನಯನ ಭೂಮಿಯಲ್ಲಿ ಹೆಚ್ಚುಮಳೆ ಬಂದು ಇಲ್ಲವೆ ಮಂಜು ಹಿಮ ಕರಗಿ ಉಪನದಿಗಳೆಲ್ಲ ಒಂದೇ ಕಾಲದಲ್ಲಿ ಹೆಚ್ಚು ನೀರನ್ನು ತಂದು ತಾಯಿ ಹೊಳಗೆ ಸುರಿದಾಗ ಮಹಾ ಪ್ರವಾಹ ಬರುತ್ತದೆ. ಅನಾಹುತ ಸಂಭವಿಸುತ್ತವೆ. ಇದೇ ವೇಳೆ ಕೆರೆಯ ಏರಿ, ದೊಡ್ಡ ಜಲಾಶಯ ಕಟ್ಟೆ ಮುಂತಾದವೇನಾದರೂ ಒಡೆದರೆ ಸ್ಥಿತಿ ಚಿಂತಾಜನಕವಾಗುತ್ತದೆ. ನದಿಗಳು ವಿಪರಿತ ಗೋಡುಮಣ್ಣನ್ನು (ಸಿಲ್ಟ್) ಸ್ವಾಭಾವಿಕವಾಗಿ ಸಾಗಿಸುತ್ತವೆ. ಹೊಳೆಯ ಪ್ರವಾಹಕ್ಕೆ ಏನಾದರೂ ತಡೆ ಬಂದಾಗ ಆ ಗೋಡು ಒಂದು ಕಡೆ ಶೇಖರವಾಗುತ್ತದೆ. ಇದನ್ನು ಯಂತ್ರಗಳಿಂದ ಎತ್ತದೆ ಹೋದರೆ ನದಿಯ ತಳ ಮೇಲಕ್ಕೆದ್ದು ನೀರು ಹೊರಳಿ ದಡಗಳ ಮೇಲೆ ಹರಿಯುತ್ತದೆ. ಭಾರತದಲ್ಲಿ ಸಿಂಧು, ಚೀನದಲ್ಲಿ ಹಳದಿ, ಈಜಿಪ್ಟಿನಲ್ಲಿ ನೈಲ್, ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಮಿಸಿಸಿಪಿ ಈ ನದಿಗಳಲ್ಲಿ ಹೀಗೆ ನೀರು ದಡಗಳ ಮೇಲೆ ಉರುಳುತ್ತದೆ. ಪ್ರವಾಹದ ನೀರಿಗೆ ಎದುರಾಗಿ ನದೀಮುಖದಲ್ಲಿ ಎತ್ತರವಾದ ಅಲೆಗಳು ಎದುರಿಗೆ ಬಂದರೂ ಇದೇ ಪರಿಣಾಮವಾಗುತ್ತದೆ. ಪ್ರವಾಹ ನಿಯಂತ್ರಣದ ಕ್ರಮಗಳನ್ನು ಗೊತ್ತುಮಾಡುವುದಕ್ಕೆ ಮುಂಚೆ ಆ ನದಿಯ ಜಲಾನಯನ ಭೂಮಿಯಲ್ಲಿ ಅನೇಕ ವರ್ಷಗಳ ಅವಧಿಯಲ್ಲಿ ಬಿದ್ದ ಮಳೆ, ನದಿಯಲ್ಲಿಯೂ ಉಪನದಿಗಳಲ್ಲಿಯೂ ಹರಿದ ಪ್ರವಾಹದ ಅಳತೆ, ಹೊಳೆಯಲ್ಲಿ ಬರುವ ಗೋಡು ಮಣ್ಣಿನ ಸ್ವಭಾವ ಅಳತೆ, ನದೀಮುಖದಲ್ಲಿ ಅಲೆಗಳ ಎತ್ತರ ಮುಂತಾದ ಆಧಾರಾಂಶಗಳನ್ನು ಜಮಾಯಿಸಿರಬೇಕು.

	ಪ್ರವಾಹಗಳನ್ನು ಎದುರಿಸುವುದರಲ್ಲಿ ಎರಡು ಮಾರ್ಗಗಳಿವೆ : 1 ಯುಕ್ತ ಕಟ್ಟಡಗಳನ್ನು ನಿರ್ಮಿಸಿ ಖಾಯಮ್ಮಾಗಿ ಪ್ರವಾಹ ನಿಯಂತ್ರಣ ಮಾಡುವುದು. ಇದು ಎಲ್ಲ ಕಡೆಗಳಲ್ಲಿಯೂ ಸಾಧ್ಯವಿಲ್ಲ. ಸಾಧ್ಯವಾಗುವಲ್ಲಿಯೂ ಬೇಗ ಆಗುವ ಕೆಲಸವಲ್ಲ. 2 ನದಿಯ ಬಯಲಿಗೆ ಅತಿಕ್ರಮ ಪ್ರವೇಶ ಮಾಡಿರುವ ಮಾನವನೇ ಪ್ರವಾಹದ ಸ್ವಭಾವವನ್ನು ಅರಿತು ಅದಕ್ಕೆ ಹೊಂದಿಕೊಳ್ಳುವುದು. ಒಂದೇ ಸಾರಿ ಮಹಾಪ್ರವಾಹ ನುಗ್ಗಬಹುದಾದ ವಿಶಾಲವಾದ ಬಯಲುಗಳನ್ನೆಲ್ಲ ಬಿಟ್ಟು ಹಿಂದಕ್ಕೆ ಸರಿಯಬೇಕಾಗಿಯೂ ಇಲ್ಲ. ಮಾನವ ಒತ್ತುವರಿ ಮಾಡಿರುವುದರಿಂದ ಆಗಬಹುದಾದ ಅಪಾಯಗಳ ಕಡೆಗೆ ಲಕ್ಷ್ಯವಿದ್ದರೆ ಸಾಕು. ವಾಸ್ತವವಾಗಿ ಪ್ರವಾಹ ನುಗ್ಗುತ್ತಿರುವಾಗ ಮಾಡಬೇಕಾದ ರಕ್ಷಣೆ, ಪರಿಹಾರ ಮತ್ತು ಬಂದೋಬಸ್ತು ತಾತ್ಕಾಲಿಕ ಉಪಶಮನದ ದಾರಿಗಳು. ಪ್ರವಾಹದ ಮುನ್ಸೊಚನೆ, ನೊಂದವರಿಗೆ ಸೌಕರ್ಯಗಳು, ಪ್ರತ್ಯೇಕ ವಲಯಗಳ ನಿರ್ಮಾಣ ಇವು ಜಲಧರ್ಮಶಾಸ್ತ್ರಜ್ಞ, ಯೋಜನಶಾಖೆಯ ನೌಕರ, ಸಾಮಾಜಿಕ ಕಾರ್ಯಕರ್ತ, ಯಂತ್ರಶಿಲ್ಪಿ ಮುಂತಾದವರ ಸಹಾಕರವನ್ನು ಅಪೇಕ್ಷಿಸುತ್ತವೆ.

	ಯಾವ ಜಾಗದಲ್ಲಿ ಮನೆಗಳನ್ನು ಕಟ್ಟುವುದರಲ್ಲಿ ಹೆಚ್ಚಿನ ಅಪಾಯವಿದೆಯೋ ಆ ಜಾಗವನ್ನು ಬೇಸಾಯಕ್ಕಾಗಿ ಉಪಯೋಗಿಸಬಹುದು. ಈಗಾಗಲೇ ಜನರು ಮನೆಗಳನ್ನು ಕಟ್ಟಿರುವ ಭೂಮಿಯನ್ನು ಕೊಂಡುಕೊಳ್ಳುವುದಕ್ಕೆ ಹೆಚ್ಚು. ಹಣ ಬೇಕಾಗುತ್ತದೆ. ವಲಯಗಳನ್ನು ನಿರ್ಮಾಣ ಮಾಡುವಾಗ ಒಂದೊಂದು ಜಾಗದಲ್ಲಿಯೂ ಪ್ರವಾಹ ಏರುವ ಸಂಭವವನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಮನೆಗಳನ್ನು ಕಟ್ಟಲೇಬೆಕಾದರೆ ಕೆಳಭಾಗವನ್ನು ಬಿಟ್ಟು ಕಾಂಕ್ರೀಟಿನ ಕಂಬಗಳ ಮೇಲೆ ವಾಸದಮನೆಗಳನ್ನು ನಿರ್ಮಿಸಬಹುದು. ತಗ್ಗಾದ ಪ್ರದೇಶಗಳಲ್ಲಿ ಕೊಳಗಳನ್ನು ಕಟ್ಟಿ ಗೋಮಾಳಗಳನ್ನು ಕಲ್ಪಿಸಬಹುದು.

	ಜಲಧರ್ಮಶಾಸ್ತ್ರದ ಸಹಾಯದಿಂದ ಪೂರ್ವಭಾವಿಯಾಗಿ ಇಂಥ ಜಾಗಗಳಿಗೆ ಅಪಾಯವಿರುವುದೆಂದು ಪ್ರವಾಹ ಕಾಲದಲ್ಲಿ ಸೂಚಿಸಿದರೆ ಅಲ್ಲಿಯ ಜನರು ಸಕಾಲದಲ್ಲಿ ಆದಷ್ಟು ಆಸ್ತಿಯನ್ನು ತೆಗೆದುಕೊಂಡು ಹೊರಕ್ಕೆ ಹೋಗಲು ಅನುಕೂಲವಾಗುತ್ತದೆ. ಈ ವಿಧವಾದ ಮುನ್ಸೂಚನೆಯನ್ನು ಮೊದಲಬಾರಿ 1854ರಲ್ಲಿ ಪ್ಯಾರಿಸ್ಸಿನ ಹತ್ತಿರ ಸೀನ್ ನದಿಯ ಬಯಲಿನಲ್ಲಿ ಮೂರು ದಿನಗಳಿಗೆ ಮುಂಚೆಯೇ ಕೊಟ್ಟರು. ಪ್ರವಾಹಕಾಲದಲ್ಲಿ ತಂತಿ ಮತ್ತು ದೂರವಾಣಿ ಕಂಬಗಳು ಉರುಳಿ ಹೋಗುತ್ತವೆ. ಆಗ ವರ್ತಮಾನವನ್ನು ಪ್ರೇಷಿಸುವುದಕ್ಕೆ ರೇಡಿಯೂ ಒಂದೇ ನಂಬಿಕೆಯ ಮಾರ್ಗ. ಜಲಧರ್ಮಶಾಸ್ತ್ರಜ್ಞರು ಒಂದು ನದಿಯಲ್ಲಿ ಇಷ್ಟು ಸಲೆ-ಮೀಟರ್ ನೀರು ಬರಬಹುದೆಂದು ಹೇಳಬಲ್ಲರು. ಆ ನೀರು ಒಂದೊಂದು ಜಾಗದಲ್ಲಿಯೂ ಹೊಳೆಯಲ್ಲಿ ಎಷ್ಟು ಮೀಟರ್ ಎತ್ತರಕ್ಕೆ ಏರುವುದೆಂದು ಹೇಳುವುದು ಅಷ್ಟು ಸುಲಭವಲ್ಲ. ಕಳ್ಳ ಹೊಳೆಗಳಲ್ಲಂತೂ ಪ್ರವಾಹ ಬಲು ಬೇಗ ಏರುವುದರಿಂದ ಮುನ್ಸೂಚನೆ ಸಾಧ್ಯವೇ ಆಗಲಾರದು.

	ಪ್ರವಾಹ ನಿಯಂತ್ರಣದಲ್ಲಿ ಸ್ಥೂಲವಾಗಿ ಎರಡು ಕ್ರಮಗಳಿವೆ. ಮೊದಲನೆಯ ಕ್ರಮದಲ್ಲಿ ಪ್ರವಾಹದ ತೀಕ್ಷ್ಣತೆಯನ್ನು ಇಳಿಸದೆ ಬಂದ ಪ್ರವಾಹವೆಲ್ಲ ಹೊರಕ್ಕೆ ಹೋಗುವ ಹಾಗೆ ಹಾದಿ ಮಾಡುತ್ತಾರೆ. ಎರಡನೆಯ ಕ್ರಮದಲ್ಲಿ ಮೇಲುಗಡೆ ಜಲಾಶಾಯದಲ್ಲಿ ನೀರನ್ನು ಶೇಖರಿಸಿ ಪ್ರವಾಹವನ್ನು ತಗ್ಗಿಸಿ ಅದು ಇರುವ ಹೊಳೆಯ ಪಾತ್ರದಲ್ಲಿ ಹೋಗುವ ಹಾಗೆ ಮಾಡುತ್ತಾರೆ. ಹೊಳೆಯ ಪಾತ್ರವನ್ನು ಕೊಂಚ ಅಗಲವಾಗಿ ಮಾಡಿ ಪ್ರವಾಹದ ತೀಕ್ಷ್ಣತೆಯನ್ನು ಕೊಂಚ ತಗ್ಗಿಸುವ ಮೂರನೆಯ ಕ್ರಮವನ್ನೂ ಅನುಸರಿಸಬಹುದು.

	ಮೊದಲನೆಯ ವಿಧಾನದಲ್ಲಿ ಹೊಳೆಯ ಪಾತ್ರವನ್ನು ಅಗಲವಾಗಿಯೂ ಆಳವಾಗಿಯೂ ಮಾಡಿ ಇಲ್ಲವೆ ದಡಗಳಲ್ಲಿ ಮಣ್ಣಿನ ಏರಿಗಳನ್ನು ಕಟ್ಟಿ ಗರಿಷ್ಠ ಪ್ರವಾಹವನ್ನು ಒಯ್ಯುವಂತೆ ಮಾಡುತ್ತಾರೆ. ಹರಿಯುವ ನೀರಿನ ವೇಗವನ್ನು ಹೆಚ್ಚಿಸಿದರೆ ಪ್ರವಾಹದ ಆಳ ಕಡಿಮೆಯಾಗಿ ನೀರು ದಡದ ಬಯಲುಗಳ ಮೇಲೆ ದೂರವಾಗಿ ನುಗ್ಗುವುದಿಲ್ಲ. ಪ್ರವಾಹವೂ ಹೆಚ್ಚು ಕಾಲ ಹೊಳೆಯಲ್ಲಿ ನಿಲ್ಲುವುದಿಲ್ಲ ಆಗಾಗ ಬಯಲುಗಳ ಮೇಲೆ ಉರುಳುವುದಿಲ್ಲ. ನದೀ ಪಾತ್ರ ಒರಟಾಗಿದ್ದಷ್ಟೂ ಹರಿಯುವ ನೀರು ಕಮ್ಮಿ. ಪ್ರವಾಹದ ಮೇಲ್ಮೈಯ ಓಟ ಹೆಚ್ಚಾದಷ್ಟೂ ಹೆಚ್ಚು ನೀರು ಹರಿಯುತ್ತದೆ. ಆದರೆ ಅನಿರೀಕ್ಷಿತವಾಗಿ ಬರುವ ಮಹಾಪ್ರವಾಹಗಳನ್ನೆಲ್ಲ ಈ ಕ್ರಮದಲ್ಲಿ ನದಿಯ ಪಾತ್ರದೊಳಗೆ ಬಿಡುವುದು ಸಾಧ್ಯವಿಲ್ಲ. ಎರಡನೆಯ ವಿಧಾನದಲ್ಲಿ ಯುಕ್ತವಾದ ಸ್ಥಳದಲ್ಲಿ ಒಂದು ಜಲಾಶಯವನ್ನು ನಿರ್ಮಾಣ ಮಾಡಿ ಪ್ರವಾಹದ ಒಂದು ಪಾಲನ್ನು ಅದರಲ್ಲಿ ಕೂಡಿಟ್ಟು ಉಳಿದದ್ದನ್ನು ಅನುಕೂಲವಾದಾಗ ತೂಬುಗಳ ಮೂಲಕ ಬಿಡುತ್ತಾರೆ.

	ಜಲಾನಯನ ಭೂಮಿಯ ಆಕಾರ : ಭೂಮಿಯ ಅಳತೆ, ಬೀಳುವ ಮಳೆ, ನೆಲದ ಮೇಲೆ ಹರಿಯುವ ನೀರು ಇವು ಒಂದೇ ಆಗಿದ್ದರೂ ಜಲಾನಯನ ಪ್ರದೇಶದ ಆಕಾರ ವ್ಯತ್ಯಾಸವಾದರೆ ಪ್ರವಾಹದ ಸಂಭವವೂ ವ್ಯತ್ಯಾಸವಾಗುತ್ತದೆ. ಮಡಚು ಬೀಸಣಿಗೆಯನ್ನು ತೆರೆದ ಹಾಗಿರುವ ಭೂಮಿಯಿಂದ ಉಪನದಿಗಳ ನೀರು ಜಲಾಶಯದ ಬಳಿಗೆ ಒಂದೇ ಕಾಲದಲ್ಲಿ ಬಂದು ಸೇರುವುದರಿಂದ ತೀವ್ರವಾದ ಪ್ರವಾಹ ಬರುತ್ತದೆ. ಹಿಗಲ್ಲದೆ ಉದ್ದ ಕಿರಿದಾಗಿರುವ ಭೂಮಿಯಿಂದ ಒಂದೊಂದು ಉಪನದಿಯ ಪ್ರವಾಹವೂ ಬೇರೆ ಬೇರೆ ಕಾಲದಲ್ಲಿ ಬಂದು ಉರುಳಿ ಹೋಗಿ, ಒಟ್ಟು ಬರುವ ನೀರಿನ ಗಾತ್ರ ಒಂದೇ ಆದರೂ ಒಂದೊಂದು ಪ್ರವಾಹವೂ ಅಷ್ಟು ತೀಕ್ಷ್ಣವಾಗಿರುವುದಿಲ್ಲ. ಸ್ವಾಭಾವಿಕವಾಗಿಯೇ ಸ್ವಲ್ಪಮಟ್ಟಿಗೆ ಪ್ರವಾಹ ನಿಯಂತ್ರಿತವಾಗುತ್ತದೆ. ತೆರೆದ ಬೀಸಣಿಗೆ ಆಕಾರದ ಜಲಾನಯನ ಭೂಮಿಯಲ್ಲಿ ಜಲಾಶಯವನ್ನು ಕಟ್ಟಿ ಪ್ರವಾಹವನ್ನು ನಿಯಂತ್ರಿಸಬೇಕಾಗುತ್ತದೆ.

	ಏರಿಗಳಿಂದ ರಕ್ಷಣೆ : ನದಿಯ ಎರಡು ದಡಗಳಲ್ಲಿಯೂ ಸುಮಾರಾಗಿ ಎತ್ತರವಾದ ಮಣ್ಣಿನ ಏರಿಗಳನ್ನು ಕಟ್ಟಿದರೆ ಪ್ರವಾಹ ಕಾಲದಲ್ಲಿ ನೀರು ಈ ಏರಿಗಳ ಮಧ್ಯೆ ನಿಂತು ತಗ್ಗಾದ ಬಯಲುಗಳಿಗೆ ನುಗ್ಗುವುದಿಲ್ಲ. ನದಿಗಳ ಕುದುರು ವಿಭಾಗದಲ್ಲಿ ಇದೊಂದೇ ಖಾತ್ರಿಯಾದ ಪ್ರವಾಹ ರಕ್ಷಣೆಯ ಕ್ರಮ. ಈ ಕ್ರಮದಲ್ಲಿ (i) ಪ್ರವಾಹ ವೇಗವಾಗಿ ಹರಿದುಹೋಗುತ್ತದೆ. (ii) ನೀರಿನ ಮಟ್ಟ ಹೆಚ್ಚಾಗಿದ್ದು ಕೆಳಗಡೆ ಹೆಚ್ಚಿನ ಪ್ರವಾಹ ಮುಂದೆ ಸಾಗುತ್ತದೆ. (iii) ವೇಗ ಹೆಚ್ಚುವುದರಿಂದ ಹೊಳೆಯ ತಳದಲ್ಲಿರುವ ಮರಳು ಮತ್ತು ಮೆಕ್ಕಲು ಮಣ್ಣು ಕೆಳಕ್ಕೆ ಹೋಗುತ್ತವೆ. ಏರಿಗಳು ಇಲ್ಲದೇ ಇರುವ ಕಡೆ ನೀರು ತಗ್ಗಾದ ದಡಗಳ ಮೇಲೆ ಉರಳಿ ಹಿಂದುಗಡೆ ಇರುವ ಗುಂಡಿಗಳನ್ನು ತುಂಬುತ್ತದೆ.  
  (ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ